ಕೆಲವರಿಗೆ ಕಾರಿರುಳ ರಾತ್ರಿಯ ಪಯಣಗಳು ರೋಚಕ ಅನುಭವ ನೀಡುತ್ತವೆ. ಇನ್ನು ಕೆಲವರಿಗೆ

ಸಾಧನೆಯಲ್ಲಿ ಸಾಗಿ ತಮ್ಮ ಗುರಿ ಮುಟ್ಟಲು ನಟ್ಟಿರುಳ ರಾತ್ರಿಯಲ್ಲಿ ಸ್ಮಶಾನದ ಶವಗಳೇ ಬೇಕು.
ಇಷ್ಟಾರ್ಥ ಸಿದ್ದಿಗಾಗಿ ನಡೆಯುವ ಈ ಚಿದಂಬರ ರಹಸ್ಯದ ಸಾಧನೆಗಳು ನಿಜವಾಗಿ ಪ್ರಕೃತಿ ಮತ್ತು ದೇವರನ್ನು ತೃಪ್ತಿಗೊಳಿಸಬಲ್ಲವೇ ಎನ್ನುವ ಪ್ರಶ್ನೆಗೆ ಉತ್ತರವಂತೂ ಇನ್ನೂ ನಮಗೆ ಸಿಕ್ಕಿಲ್ಲ. ಆದರೆ ಅಂತಹ ಸಾಧನೆಯೊಂದನ್ನು ನೋಡುವ ಅವಕಾಶದಲ್ಲಿ ರೋಮಾಂಚನ ಅನುಭವಿಸಿದ ಪ್ರಸಂಗವೊಂದು ನಮಗೆ ಎದುರಾಗಿತ್ತು !
ನಡು ರಾತ್ರಿಯಲ್ಲಿ ನಡೆಯವ ಶವ ಸಾಧನೆಯನ್ನು ನೋಡಬೇಕೆಂಬುದು ನಮ್ಮ ಕಾತುರ. ಇದಕ್ಕೆ ಹೂಂಗುಟ್ಟಿದವರು ಚಂದ್ರಪಾಲ್ ಎನ್ನುವ ಮಾಂತ್ರಿಕ. ಮಧ್ಯಪ್ರದೇಶದ ಉಜ್ಜಯಿನಿ ಸಮೀಪ ಕ್ಷಿಪ್ರಾ ನದಿ ಬಳಿಯ ಚಕ್ರತೀರ್ಥ ಸ್ಮಶಾನದಲ್ಲಿ ಚಂದ್ರಪಾಲ್ ಮಾಡಿದ ಶವ ಸಾಧನೆಯ ತುಣುಕುಗಳನ್ನು ನೋಡಿ ಭಯದಿಂದ ತಲೆ ಸುತ್ತುವುದು ಒಂದು ಬಾಕಿ.
ಕ್ಷಿಪ್ರಾ ನದಿ ತಟದ ಮೇಲೆ ನಡೆದ ಆ ಶವ ಸಾಧನೆಯ ಆರಂಭಿಕ ಹಂತಗಳ ಪರಿಚಯ ಮಾತ್ರ ಓದುಗರಿಗೆ ನೀಡಬಹುದು. ಅಂತಿಮ ಹಂತದ ಶವ ಸಾಧನೆಯ ಕ್ರಮಗಳು ನಮಗೆ ದೊರೆತಿಲ್ಲ.
ಅದು ಶವಸಾಧನೆಯ ಮಧ್ಯರಾತ್ರಿ. ಮಾಂತ್ರಿಕ ಚಂದ್ರಪಾಲ್ ಶವ ಪೂಜೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತ ಕ್ಷಿಪ್ರಾ ನದಿಯಲ್ಲಿ ದೀಪಗಳನ್ನು ತೇಲಿ ಬಿಡುತ್ತಾರೆ. ಆ ದೀಪಗಳು ಆ ಶವದ ಆತ್ಮಕ್ಕೆ ದಾರಿದೀಪವಾಗಿ ಶವ ಸಾಧಕನ ಇಚ್ಛೆಗಳನ್ನು ಪೂರೈಸಲು ಬರುತ್ತವೆ.