
ಸಂಸ್ಕೃತ ಹಾಗೂ ಆಂಗ್ಲಭಾಷೆಯಲ್ಲೂ ಸುಮಾರು 20ಕ್ಕೂ ಹೆಚ್ಚು ಕೃತಿಗಳು ರಚನೆಗೊಂಡಿವೆ. ಅವರು ಅಪ್ಪಟ ಕನ್ನಡಿಗ. ಪ್ರಸ್ತುತ ಬೆಂಗಳೂರಿನ ಜಯನಗರದಲ್ಲಿ ವಾಸವಾಗಿರುವ ಅವರು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ವೆಬ್‌ದುನಿಯಾ ಕನ್ನಡಕ್ಕಾಗಿ ವಿಶೇಷ ಸಂದರ್ಶನ ನೀಡಿದ್ದಾರೆ.
ಗಾಂಧೀಜಿಯವರೊಂದಿಗಿನ ನಿಮ್ಮ ಸಂಬಂಧ ನೆನಪಿಸಿಕೊಳ್ಳಿ ?
ಗಾಂಧೀಜಿಯವರಿಗೂ ನನಗೂ ಆತ್ಮೀಯ ಸ್ನೇಹ. ಅವರನ್ನು ನಾನು ಸಂಪೂರ್ಣ ಅರ್ಥ ಮಾಡಿಕೊಂಡಿದ್ದೆ. ನನಗೆ ಎಲ್ಲಾ ಭಾಷೆಗಳ ಮೇಲೆ ಪ್ರಭುತ್ವವಿತ್ತು. ದೇಶದ ಉದ್ದಗಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದೆ. ನಾನು ಜೈಲಿನಲ್ಲಿದ್ದ ಸಮಯದಲ್ಲಿ ಗಾಂಧೀಜಿ ಸ್ವಾತಂತ್ರ್ಯ ಹೋರಾಟದಲ್ಲಿದ್ದರು. ಅವರು ಜೈಲಿನಲ್ಲಿದ್ದ ಸಮಯದಲ್ಲಿ ನಾನು ಬಹುತೇಕ ಹೊರಗಡೆ ಇದ್ದೇ ಕಾರ್ಯಾಚರಿಸುತ್ತಿದ್ದೆ.
ಮಹಾತ್ಮಾ ಮುನ್ಷಿರಾಮ್ ನನ್ನ ಗುರುಗಳು. ಆ ದಿನಗಳಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಆಗತಾನೇ ದೇಶಕ್ಕೆ ಆಗಮಿಸಿದ್ದರು. ಅದು 1915 ಏಪ್ರಿಲ್ 3. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಗಾಂಧೀಜಿಯವರ ಕಳಕಳಿಯನ್ನು ಗಮನಿಸಿದ ಮುನ್ಷಿ ಅವರಿಗೆ ಬಿರುದುಕೊಡಬೇಕು. ಏನನ್ನು ಕೊಡೋಣ ಎಂದು ಕೇಳಿದರು. ನಾನೇ ಮುನ್ಷಿಯವರಿಗೆ ನಿಮ್ಮ ಹೆಸರಿನ ಹಿಂದೆ "ಮಹಾತ್ಮಾ" ಇದೆಯಲ್ಲಾ, ಅದನ್ನೇ ಅವರಿಗೆ ಕೊಟ್ಟು ಬಿಡಿ ಎಂದಿದ್ದೆ. ಹಾಗೆ ಅಲ್ಲಿಯವರೆಗೆ ಎಂ.ಕೆ. ಗಾಂಧಿ ಎಂದು ಸಹಿ ಮಾಡುತ್ತಿದ್ದ ಗಾಂಧೀಜಿ, "ಮಹಾತ್ಮಾ ಗಾಂಧಿ"ಯಾದರು. ಗಾಂಧೀಜಿ ಮಹಾತ್ಮಾ ಆಗೋದರಲ್ಲಿ ನನ್ನ ಪಾತ್ರವೂ ಇದೆ ಎಂಬುದು ನನಗೆ ತುಂಬಾನೇ ಖುಷಿ ಕೊಟ್ಟ ವಿಷಯ.
ಸ್ವಾತಂತ್ರ್ಯ ಹೋರಾಟದ ಆ ದಿನಗಳ ಬಗ್ಗೆ ಒಂದಿಷ್ಟು ಹೇಳಿ...
ಸ್ವಾತಂತ್ರ್ಯ ಹೋರಾಟಕ್ಕೆ ನಮಗೆ ಇಂಥದ್ದೇ ಪ್ರದೇಶ ಎಂಬುದಿರಲಿಲ್ಲ. ಕರಾಚಿಯಿಂದ ಕೊಯಮತ್ತೂರುವರೆಗೆ ನಮ್ಮ ಕಾರ್ಯಕ್ಷೇತ್ರ. ಗಾಂಧಿಯವರೊಂದಿಗೆ ಸಾವಿರಾರು ಮೈಲಿ ಸುತ್ತಿದ್ದೇನೆ. ಕರಾಚಿ, ವೆಲ್ಲೂರು, ಕೊಯಮತ್ತೂರು ಜೈಲುಗಳಲ್ಲಿಯೂ ಕಾಲ ಕಳೆದಿದ್ದೇನೆ. ಬದುಕಿನ ಹದಿನೈದು-ಇಪ್ಪತ್ತು ವರ್ಷಗಳ ಕಾಲ ಜೈಲಿನಲ್ಲೇ ಕಳೆದಿದ್ದೆ. ಆದರೆ ಅಲ್ಲಿರುವಾಗಲೇ ನನಗೆ ಅನೇಕ ಕೃತಿಗಳ ರಚನೆ ಮಾಡಲು ಸಾಧ್ಯವಾಯಿತು. "ವೇದ ಪ್ರಕಾಶ ಪ್ರದೀಪ"ವನ್ನು ಆ ದಿನಗಳಲ್ಲೇ ಬರೆದೆ.
ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ.