ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು, ಸೌಪರ್ಣಿಕಾ

ತಟದಲ್ಲಿರುವ ವಾಸ್ತುಶಿಲ್ಪ ಆಧಾರಿತ ಶಾಸ್ತ್ರೋಕ್ತವಾದ ಮಧ್ಯಮ ಗಾತ್ರದ ಶಿಲಾಮಯ ಪುಣ್ಯಕ್ಷೇತ್ರ. ಇಲ್ಲಿ ಭಕ್ತ ವತ್ಸಲೆಯಾದ ಶ್ರೀದೇವಿಯು ಮೂಕಾಂಬಿಕೆಯ ರೂಪದಲ್ಲಿ ನೆಲೆಸಿ ಭಕ್ತ ಜನಕೋಟಿಯನ್ನು ಹರಸುತ್ತಿದ್ದಾಳೆ.
ವಿಶೇಷತೆ:
ಈ ಪುಣ್ಯ ಕ್ಷೇತ್ರವು ವಿದ್ಯಾದಶಮಿ ದಿನ ನಡೆಯುವ ಅಕ್ಷರಾಭ್ಯಾಸಕ್ಕೆ ಹೆಸರುವಾಸಿ. ದೇಶದೆಲ್ಲೆಡೆಯಿಂದ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳಿಗೆ ಭಕ್ತಿಯ ತಾಣವಿದು. ತಮಿಳುನಾಡು ಮಾಜಿ ಮುಖ್ಯಮಂತ್ರಿ/ನಟ ಎಂಜಿಆರ್ ಅವರು ಈ ಕ್ಷೇತ್ರಕ್ಕೆ ಚಿನ್ನದ ಖಡ್ಗ ಒಪ್ಪಿಸಿದ್ದರೆ, ಸಂಗೀತ ನಿರ್ದೇಶಕ ಇಳಯರಾಜ ಅವರು ಕೋಟಿ ರೂ. ಮೌಲ್ಯದ ವಜ್ರ ಖಚಿತ ಹಸ್ತ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಒಂದು ಆನೆಯನ್ನು ಭಕ್ತಿಯಿಂದ ಸಮರ್ಪಿಸಿದ್ದಾರಲ್ಲದೆ ಚೆನ್ನೈನಿಂದ ಕೊಲ್ಲೂರಿಗೆ ಬಸ್ ಸೌಲಭ್ಯವನ್ನೂ ಕಲ್ಪಿಸಿದ್ದಾರೆ. ಉದ್ಯಮಿ ವಿಜಯ ಮಲ್ಯ ಅವರು ಧ್ವಜಸ್ಥಂಬಕ್ಕೆ ಚಿನ್ನದ ಹೊದಿಕೆ ಮಾಡಿಸಿದ್ದಾರೆ. ನಾಲ್ಕು ಕೋಟಿ ರೂ. ಅಂದಾಜು ವೆಚ್ಚದ ಸ್ವರ್ಣ ರಥ ಇಲ್ಲಿ ಗಮನ ಸೆಳೆಯುತ್ತದೆ. ಖ್ಯಾತ ಗಾಯಕ ಜೇಸುದಾಸ್ ಇಲ್ಲಿಯ ಪರಮ ಭಕ್ತರು. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಸೇರಿದಂತೆ ಇವರೆಲ್ಲರೂ ಇಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.